- ಪುಸ್ತಕದ ಹೆಸರು: ಖಗೇಂದ್ರಮಣಿದರ್ಪಣ
- ಲೇಖಕನ ಹೆಸರು: ಮಂಗರಸ-2
- ಕಾಲ: ಹದಿನಾಲ್ಕನೆಯ ಶತಮಾನ
- ವಸ್ತು: ವಿಷವೈದ್ಯ (ಔಷಧ ಶಾಸ್ತ್ರ)
-
ಪರಿಚಯ:
ಪ್ರಾಚೀನ ಕನ್ನಡದ ಜ್ಞಾನಕೇಂದ್ರಿತ ಗ್ರಂಥಗಳಲ್ಲಿ, ಖಗೇಂದ್ರಮಣಿ ದರ್ಪಣಕ್ಕೆ ವಿಶೇಷವಾದ ಸ್ಥಾನವಿದೆ.
ಏಕೆಂದರೆ, ಅದು ವಿಷವೈದ್ಯವನ್ನು ಕುರಿತಂತೆ ನಮಗೆ ಸಿಕ್ಕಿರುವ ಒಂದೇ ಒಂದು ಹಳಗನ್ನಡ ಪುಸ್ತಕ. ಇದನ್ನು
ಬರೆದವನು ಎರಡನೆಯ ಮಂಗರಸ. ಹೊಯ್ಸಳ ರಾಜವಂಶಕ್ಕೆ ಸೇರಿದ ಮಂಗರಸನು ವಿಜಯನಗರದ ಅರಸುಪೀಳಿಗೆಯ ರಾಜನಾದ,
ಹರಿಹರನ ಸಮಕಾಲೀನನಾಗಿದ್ದನು.
ಈ ಶೀರ್ಷಿಕೆಯಲ್ಲಿ, ಖಗೇಂದ್ರ ಎಂದರೆ, ಪಕ್ಷಿರಾಜನೂ ಹಾವುಗಳಿಗೆ
ಹಗೆಯೂ ಆದ ಗರುಡ. ಈ ಪುಸ್ತಕದ ಒಂದು ಓಲೆಗರಿಯ ಹಸ್ತಪ್ರತಿಯು, ಕಿರುಬರೆಹದ ಶೈಲಿಯಲ್ಲಿ (ಮಿನೇಚರ್
ಸ್ಟೈಲ್) ಬರೆಯಲ್ಪಟ್ಟಿದ್ದು, ಆ ಕಾರಣದಿಂದಲೇ ಸಂಗ್ರಹಯೋಗ್ಯವಾಗಿದೆ. ಖಗೇಂದ್ರಮಣಿದರ್ಪಣದಲ್ಲಿ ಹದಿನಾರು
ಅಧ್ಯಾಯಗಳೂ 8000 ಗ್ರಂಥಗಳೂ ಇವೆ. ಇದನ್ನು ಚಂಪೂ ಶೈಲಿಯಲ್ಲಿ ರಚಿಸಲಾಗಿದೆ. ವೃತ್ತ, ಕಂದಪದ್ಯ ಮತ್ತು
ವಚನಗಳೆಲ್ಲವನ್ನೂ ಇಲ್ಲಿ ಕಾಣಬಹುದು. ಮಂಗರಸನು ತನಗಿಂತ ಹಿಂದಿನ ವಿದ್ವಾಂಸರಾದ ಪೂಜ್ಯಪಾದ ಮುಂತಾದವರನ್ನು
ಸ್ಮರಿಸಿಕೊಳ್ಳುತ್ತಾನೆ. ಅವನು ಜೈನ ಧಾರ್ಮಿಕ ಗ್ರಂಥಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಿದ್ದಾನೆ.
ಆದರೆ, ಅವನು ಹೆಚ್ಚಾಗಿ ಅನುಸರಿಸಿರುವುದು ‘ಕಾಶ್ಯಪಸಂಹಿತೆ’ಯನ್ನು. ಶೇಷಯ್ಯಂಗಾರ್ ಅವರ ಆವೃತ್ತಿಯು, ಮೂಲ ಸಂಸ್ಕೃತ ಶ್ಲೋಕಗಳನ್ನೂ ಕೊಟ್ಟಿದೆ. ಪ್ರಕೃತಿ, ರಾತ್ರಿ,
ಕಾಮ, ಮದ್ಯಪಾನ, ಸೂಳೆಗಾರಿಕೆ ಮುಂತಾದ ವಿಷಯಗಳನ್ನು ಕುರಿತು ಬರೆಯುವುದಕ್ಕಿಂತ, ವಿಷವೈದ್ಯದಂತಹ ಜನೋಪಕಾರಿಯಾದ
ವಿಷಯಗಳನ್ನು ಕುರಿತು ಬರೆಯುವುದು ಒಳ್ಳೆಯದೆಂದು ಮಂಗರಸನ ಅಭಿಪ್ರಾಯ. ಅದನ್ನು ಒಪ್ಪಿಕೊಂಡಾಗಲೂ ಜ್ಞಾನಕೇಂದ್ರಿತವಾದ
ಈ ಪುಸ್ತಕಕ್ಕೆ, ಸಾಹಿತ್ಯದ ಹೊಳಪನ್ನು ಕೊಡುವುದರಲ್ಲಿ, ಮಂಗರಸನು ಯಶಸ್ವಿಯಾಗಿದ್ದಾನೆ.
ಈ ಪುಸ್ತಕದಲ್ಲಿ ಹಾವುಗಳು, ಚೇಳುಗಳು, ಮದ್ಯ, ಕೀಟಗಳು, ಕೆಟ್ಟುಹೋದ
ಕಾಳುಗಳು ಮುಂತಾದ ಹತ್ತು ವಿಷಮೂಲಗಳನ್ನು ಹೇಳಲಾಗಿದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಮಂಗರಸನು ಪ್ರತಿವಿಷವನ್ನು
ಸೂಚಸುತ್ತಾನೆ. ಕೇವಲ ವಿಷಗಳು ಮಾತ್ರವಲ್ಲ, ಇತರ ಸಮಸ್ಯೆಗಳಿಗೂ ರೋಗನಿದಾನ(ಡಯಾಗ್ನೊಸಿಸ್) ಮತ್ತು
ಚಿಕಿತ್ಸೆಗಳನ್ನು ಇಲ್ಲಿ ಕೊಡಲಾಗಿದೆ. ಈ ಪುಸ್ತಕವನ್ನು ಹೊಸಗನ್ನಡಕ್ಕೆ ಅನುವಾದ ಮಾಡುವುದು ಉಪಯುಕ್ತವಾದ
ಕೆಲಸ.
- ಪ್ರಕಟಣೆಯ ಇತಿಹಾಸ:
ಅ. 1942, ಸಂ. ಎ. ವೆಂಕಟ ರಾವ್ ಮತ್ತು ಎಚ್. ಶೇಷಯ್ಯಂಗಾರ್
(ಪ್ರಧಾನ ಸಂಪಾದಕರು-ಎಂ. ಮರಿಯಪ್ಪ ಭಟ್) ಕನ್ನಡ ಗ್ರಂಥಮಾಲೆ, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸು.
( ಈ ಕೃತಿಯನ್ನು ಬಿಹಾರದ ಆರಾ, ಕೇರಳದ ಮಂಜೇಶ್ವರ, ಮೂಡಬಿದ್ರಿ ಮುಂತಾದ ಪ್ರದೇಶಗಳಲ್ಲಿ ದೊರೆತ ಆರು
ಹಸ್ತಪ್ರತಿಗಳನ್ನು ಬಳಸಿ ಸಂಪಾದನೆ ಮಾಡಲಾಗಿದೆ. ಸಂಪಾದನ ಕಾರ್ಯವು ವೈಜ್ಞಾನಿಕವೂ ವ್ಯವಸ್ಥಿತವೂ ಆಗಿದೆ.
ಪ್ರಧಾನ ಸಂಪಾದಕರ ಮುನ್ನುಡಿ, ಸಂಪಾದಕರು ಬರೆದಿರುವ ಕವಿ-ಕಾವ್ಯ ವಿಚಾರ, ವಿಷಯಸೂಚಿ ಇತ್ಯಾದಿ ಭಾಗಗಳು
ಬಹಳ ಉಪಯುಕ್ತವಾಗಿವೆ)
- ಮುಂದಿನ ಓದು ಮತ್ತು ಲಿಂಕುಗಳು:
ಆ. ‘ಕರ್ನಾಟಕ ವಿಷವೈದ್ಯ ಪರಂಪರೆ’, ಪಿ. ಸತ್ಯನಾರಾಯಣ ಭಟ್, 2008, ಕೆ.ಎಸ್. ಮುದ್ದಪ್ಪ ಮೆಮೊರಿಯಲ್
ಟ್ರಸ್ಟ್, ಬೆಂಗಳೂರು)
- ಅನುವಾದ: